Chatrapathi Shivaji Maharaj Life

ಶೇಷಾದ್ರಿಪುರ ನಗರ - ಪ್ರಚಾರ ವಿಭಾಗ ಶಿವಾಜಿ ಸಪ್ತಾಹ ಪಾಡ್‌ಕಾಸ್ಟ್: ಭಾಗ ೮ ಪುಸ್ತಕ: ಯುಗಾವತಾರ ಲೇಖಕರು: ಶ್ರೀ ಹೊ.ವೆ. ಶೇಷಾದ್ರಿ ಹಿಂದು ಸಾಮ್ರಾಜ್ಯ ದಿನ ಮುಹೂರ್ತ ಹತ್ತಿರ ಹತ್ತಿರ ಬಂದಿತು. ಪವಿತ್ರ ನದಿಗಳ ಪುಣ್ಯೋದಕಗಳು ತವಕದಿಂದ ಕಾದಿದ್ದವು. ಮಹಾರಾಜರು, ಮಹಾರಾಣಿ, ಯುವರಾಜ ಸಂಭಾಜಿ ಸ್ವರ್ಣಪೀಠಗಳ ಮೇಲೆ ಕುಳಿತರು, ಪಂಚಾಮೃತ ಸ್ನಾನ, ಸಾಗರಗಳ ನೀರಿನ ಸಿಂಚನ, ಶುದ್ಧೋದಕ ಸ್ನಾನ. ಸಪ್ತನದಿಜಲದ ಅಭಿಷೇಕ - ಒಂದಾದ ಮೇಲೆ ಒಂದು ಆದವು . ಇಂದು ಆ ನದಿಗಳಿಗೆ ಏನು ಭಾಗ್ಯ ! “ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ...” ಮಂತ್ರೋಚ್ಚಾರ ಆಯಿತು. ಆದರೆ ಆ ಪೈಕಿ ಒಂದು ನದಿಯೂ ಸ್ವರಾಜ್ಯದಲ್ಲಿ ಸಮಾವೇಶ ಗೊಂಡಿರಲಿಲ್ಲ. ಆ ಎಲ್ಲ ನದಿಗಳೂ ತಮ್ಮ ಮುಕ್ತಿಗಾಗಿ ಮಹಾರಾಜರ ಕಿವಿಯಲ್ಲಿ ಮೊರೆಯಿಟ್ಟಿರಬೇಕು ! ಮಹಾರಾಜರೂ ಅಭಿವಚನ ನೀಡಿರಬೇಕು. ನನ್ನ ಜೀವಿತಕಾರ್ಯವೇ ಅದು, ಚಿಂತಿಸದಿರಿ ಎಂದು ! ಅನಂತರ ಮಹಾರಾಜರಿಗೆ ಸುಮಂಗಲಿಯರು ಆರತಿ ಬೆಳಗಿದರು. ಅತ್ತ ರಾಜಸಭೆಯಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದವು. ಅಮೋಘರೀತಿಯಲ್ಲಿ ಸಿಂಹಾಸನದ ಸಿಂಗಾರ ನಡೆದಿತ್ತು. ಮಹಾರಾಜರು ವಸ್ತ್ರಭೂಷಣ, ಕತ್ತಿ, ಗುರಾಣಿ, ಧನುರ್ಬಾಣ ಪೂಜಿಸಿದರು. ಭಕ್ತಿ ಪುರಸ್ಸರವಾಗಿ ಅವನ್ನು ಧರಿಸಿದರು. ರಾಜ, ರಾಣಿ, ಯುವರಾಜ ಮೂವರೂ ಕುಲದೇವತೆಗೆ, ಗುರುಹಿರಿಯರಿಗೆ, ರಾಜಮಾತೆಗೆ ವಂದಿಸಿದರು. ಆ ತಾಯಿಯು ಮಗನ ಬಗ್ಗೆ ಕಂಡ ಕನಸು ಇಂದು ನನಸಾಗಿತ್ತು ! ಹಸುಳೆ ಶಿವಬಾವನ್ನು ತೊಟ್ಟಿಲಲ್ಲಿ ತೂಗಿ ಮಲಗಿಸುತ್ತಿದ್ದಾಗ ಹೇಳಿದ ಕತೆ, ಹಾಡಿದ ಜೋಗುಳ ಇಂದು ಸಾರ್ಥಕವೆನಿಸಿತ್ತು ! ಅಷ್ಟಪ್ರಧಾನರು, ಅಂಗರಕ್ಷಕರು, ಆಪ್ತಸಚಿವರೊಡನೆ - ಮರ್ಯಾದಾ ಪುರುಷೋತ್ತಮ ಸಾಕ್ಷಾತ್ ಶ್ರೀರಾಮಚಂದ್ರನಂತೆ – ಖಡ್ಗ ಕೋದಂಡಧಾರಿಯಾಗಿ ಮಹಾರಾಜರು ರಾಜಸಭೆಗೆ ಪ್ರವೇಶಿಸಿದರು. ಅಂದು ರಾಜಸಭೆಯಲ್ಲಿ ಕಂಗೊಳಿಸುತ್ತಿದ್ದ ಪ್ರಾಚೀನ ಭಾರತೀಯ ಸಾಂಸ್ಕೃತಿಕ ಪರಂಪರೆಯ ಸುಂದರ ದರ್ಶನ ಪಡೆದು ಪ್ರಜಾಸಮುದಾಯ ಧನ್ಯವಾಯಿತು. ಪೂರ್ವದಿಕ್ಕಿಗೆ ಸ್ವರಾಜ್ಯದ ಮಂದಿರಕ್ಕೆ ತೋರಣವಾದ ತೋರಣಗಡ. ೩೦ ವರ್ಷಕ್ಕೆ ಮುಂಚೆ ಆ ಗಡದ ಮೇಲೆ ಮಹಾರಾಜರು ಕಟ್ಟಿದ ವಿಜಯ ತೋರಣವಿಂದು ಮಹಾರಾಜರ ಸಿಂಹಾಸನಾರೋಹಣವನ್ನು ಸ್ವಾಗತಿಸುತ್ತಿತ್ತು. ಅದರಾಚೆಗೆ ಭೂಮಿಗಿಳಿದಿದ್ದ ಬಾನಂಚು. ಉಷಃಕಾಲ ಸಮೀಪಿಸಿತು. ಪ್ರಾಚೀದಿಗಂತದಲ್ಲಿ ಹೊಂಬಣ್ಣ ಕಾಣತೊಡಗಿತು. ತೋರಣಗಡ ಬೆಳಗಿತು ! ಮಹಾರಾಜರು ರತ್ನಖಚಿತ ಸುವರ್ಣ ಸಿಂಹಾಸನದ ಎದುರು ಬಂದರು. ಬಲಮಂಡಿಯನ್ನು ನೆಲದ ಮೇಲೂರಿ ಶಿರಬಾಗಿ ಸಿಂಹಾಸನಕ್ಕೆ ವಂದಿಸಿದರು. ಅನಂತರ ಪೂರ್ವಾಭಿಮುಖವಾಗಿ ನಿಂತರು. ಮಂಗಳವಾದ್ಯಗಳು, ತೋಪುಗಳು ಸಿದ್ಧವಾಗಿದ್ದುವು. ಹಿಂದವಿ ಸ್ವರಾಜ್ಯದ ಪರಮೋಚ್ಚ ಸೌಭಾಗ್ಯದ ಆ ಕ್ಷಣ ! ಗಾಗಾಭಟ್ಟರು ಮತ್ತು ಅವರ ಸಹಕಾರಿ ಋತ್ವಿಜರಿಂದ ಉಚ್ಚಸ್ವರದಲ್ಲಿ ವೇದಪಠನ ಪ್ರಾರಂಭವಾಯಿತು. ಆನಂದಪುಲಕಿತರಾಗಿದ್ದ ಸಭಾಸದರೆಲ್ಲರ ಸಹಸ್ರಾರು ಕಣ್ಣುಗಳು ತದೇಕದೃಷ್ಟಿಯಿಂದ ಶಿವಾಜಿ ಮಹಾರಾಜರ ಮೇಲೆ ನೆಟ್ಟವು. ಸಿಂಹಾಸನಕ್ಕೆ ಕಾಲು ತಾಗಿಸದಂತೆ ಮಹಾರಾಜರು ಅದನ್ನೇರಿ ಕುಳಿತರು. ಒಮ್ಮೆಗೇ ಸಹಸ್ರಾರು ಭಾವಪೂರಿತ ಕಂಠಗಳಿಂದ “ಶಿವಾಜಿ ಮಹಾರಾಜ ಕೀ ಜಯ್ !” ಉದ್ಯೋಷ ಗಗನಭೇದಿಯಾಗಿ ಮೊಳಗಿತು. ವಾದ್ಯಗಳು, ಕುಶಾಲ ತೋಪುಗಳು ಪ್ರಚಂಡ ಸ್ವರದಿಂದ ಭೋರ್ಗರೆದವು. “ಹಿಂದುಸ್ಥಾನದಲ್ಲಿ ಹಿಂದುಸಿಂಹಾಸನ ಮತ್ತೊಮ್ಮೆ ಮೇಲೆದ್ದಿದೆ. ಇದು ಅಮರ, ಅಜೇಯ ಎಂದು ಅವು ಹೊರಜಗತ್ತಿಗೆ ಸಾರಿದವು. ದಿಲ್ಲಿಯ ತಲೆ ದಿಙ್ಮೂಢವಾಯಿತು; ಬಿಜಾಪುರದ ಕಿವಿ ಕಿವುಡಾಯಿತು ! ಛತ್ರಪತಿಯ ಮೇಲೆ ಸುವರ್ಣವೃಷ್ಟಿಯಾಯಿತು; ಪುಷ್ಪಾಕ್ಷತೆಗಳ ಮಳೆಗರೆಯಿತು. ಮಂಗಲಘೋಷ, ಹಾಡು, ಮಂತ್ರ, ನೃತ್ಯ, ಕಾವ್ಯ, ಆನಂದದ ಸಾಗರ ಉಕ್ಕೇರಿ ಆಗಸವನ್ನೆಲ್ಲ ತುಂಬಿತು. ಯಾವ ವರ್ಣನೆಯೂ ಸಾಲದು, ಯಾವ ವರ್ಣನೆಗೂ ನಿಲುಕದು – ಎನ್ನುವಂಥ ದಿವ್ಯ ದೃಶ್ಯ. ನಾಲ್ಕು ಪ್ರಚಂಡ ಶತ್ರುಗಳ ಎದೆಯ ಮೇಲೆ ಕಾಲಿಟ್ಟು ಈ ಸ್ವತಂತ್ರ ಹಿಂದುರಾಜ್ಯ ತಲೆಯೆತ್ತಿ ನಿಂತಿತ್ತು. ಇಂದ್ರಪ್ರಸ್ಥ, ದೇವಗಿರಿ, ವಾರಂಗಲ್, ಕರ್ಣಾವತಿ, ವಿಜಯನಗರಗಳಲ್ಲಿ ಹಿಂದೆ ಮುರಿದು ಬಿದ್ದಿದ್ದ ಸಿಂಹಾಸನ ಇಂದು ರಾಯಗಡದಲ್ಲಿ ಮತ್ತೆ ಮೈತಾಳಿತು!