10th Kannada - ಪಠ್ಯ ಪೂರಕ ಅಧ್ಯಾಯ 03: ಭಗತ್ ಸಿಂಗ್

ಪುಟ ೧೬೯


ಪಠ್ಯಪೂರಕ ಅಧ್ಯಯನ ೩


ಭಗತ್ ಸಿಂಗ್


ಲೇಖಕರು: ಡಾಕ್ಟರ್ ಜಿ. ರಾಮಕೃಷ್ಣ


ಪಠ್ಯಚೌಕ ಪ್ರಾರಂಭ


ಪ್ರವೇಶ: ಭಾರತ ಸ್ವತಂತ್ರಗೊಂಡು ಸ್ವಾತಂತ್ರ್ಯದ ಸವಿಯನ್ನು ನಾವಿಂದು ಅನುಭವಿಸುತ್ತಿದ್ದೇವೆ. ಆದರೆ ಆ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ ಮಡಿದವರು ಅಸಂಖ್ಯಾತ ದೇಶಭಕ್ತರು. ಸ್ವಾತಂತ್ರ್ಯ, ತ್ಯಾಗ ಬಲಿದಾನದ ಫಲ. ವೀರ ಸ್ವಾತಂತ್ರ್ಯಯೋಧರ ಬಲಿದಾನವನ್ನು ಸ್ಮರಿಸುವುದು ಭಾರತೀಯರೆಲ್ಲರ ಜವಾಬ್ದಾರಿ.


ಪಠ್ಯಚೌಕ ಮುಕ್ತಾಯ


ಹನ್ನೆರಡು ವರ್ಷದ ಒಬ್ಬ ಬಾಲಕ ಅಮೃತಸರದ ಜಲಿಯನ್ ವಾಲಾಬಾಗ್‍ನಲ್ಲಿ ಮೂಕನಂತೆ ಅತ್ತಿಂದಿತ್ತ ಓಡಾಡುತ್ತಿದ್ದ. ಶಾಲೆಗೆ ಹೋಗಬೇಕಾಗಿದ್ದ ಆ ಬಾಲಕ ಅಂದು ತನ್ನ ಹಳ್ಳಿಯಿಂದ ರೈಲಿನಲ್ಲಿ ಅಮೃತಸರದಲ್ಲಿ ಬಂದಿಳಿದಿದ್ದ. ಒಂದೆರೆಡು ಪುಸ್ತಕಗಳು ಹಾಗೂ ಒಂದು ಪುಟ್ಟ ಡಬ್ಬಿಯಿದ್ದ ಕೈಚೀಲ ಅವನ ಬಳಿಯೇ ಇತ್ತು. ತುಸು ಹೊತ್ತಿನ ನಂತರ ಹುಡುಗ ಜಲಿಯನ್ ವಾಲಾಭಾಗ್‍ನಲ್ಲಿ ಒಂದೆಡೆ ಅಂತರ್ಮುಖಿಯಾಗಿ ಬಹುಕಾಲ ನಿಂತ. ನಂತರ ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ. ಇನ್ನಷ್ಟನ್ನು ತನ್ನಲ್ಲಿದ್ದ ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದ. ರಾತ್ರಿ ಮನೆಗೆ ಹಿಂತಿರುಗಿದಾಗ ಅವನ ಸಹೋದರಿ ಎಂದಿನಂತೆ ಅವನನ್ನು ಊಟಕ್ಕೆಬ್ಬಿಸಿದರೆ ಒಲ್ಲೆನೆಂದು ಮುಖ ತಿರುಗಿಸಿದ. ಅವನಿಗೆ ಪ್ರಿಯವಾದ ಮಾವಿನ ಹಣ್ಣೊಂದನ್ನು ಕೂಡ ನಿರಾಕರಿಸಿ, ಅವಳನ್ನು ಮನೆಯ ಹಿಂಭಾಗಕ್ಕೆ ಕರೆದೊಯ್ದು, ತನ್ನ ಡಬ್ಬಿಯಲ್ಲಿದ್ದ ಮಣ್ಣನ್ನು ತೋರಿಸಿದ. ರಕ್ತದಲ್ಲಿ ಕಲೆಸಿದಂತಿದ್ದ ಆ ಮಣ್ಣು ಎಲ್ಲಿಯದೆಂದು ತಿಳಿದಾಗ ಅವನ ಉಪವಾಸಕ್ಕೆ ಕಾರಣ ಅವಳಿಗೆ ಗೊತ್ತಾಯಿತು. ‘ತ್ಯಾಗದ ಪ್ರತೀಕ ಆ ಮಣ್ಣು’ ಎಂದವಳಿಗೆ ತಿಳಿಯ ಹೇಳಿದ.


ಏಪ್ರಿಲ್ ಹದಿಮೂರು, ಸಾವಿರದ ಒಂಬೈನೂರ ಹತ್ತೊಂಬತ್ತ ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡಿದ್ದವರಿಗೆ ನಮನ ಸಲ್ಲಿಸಲು ಹೋಗಿದ್ದ ಆ ಬಾಲಕ ಭಗತ್ ಸಿಂಗ್. ಇಂದು ಜಲಿಯನ್ ವಾಲಾಬಾಗ್‍ನಲ್ಲಿರುವ ಒಕ್ಕಣೆ ಹೀಗಿದೆ: “ಏಪ್ರಿಲ್ - ಹದಿಮೂರು - ಸಾವಿರದ ಒಂಬೈನೂರ ಹತ್ತೊಂಬತ್ತರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ಎರಡು ಸಾವಿರ ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ.” ಭಗತ್ ಸಿಂಗ್ ಅಲ್ಲಿಗೆ ಹೋಗಿ ಅಂತರ್ಮುಖಿಯಾಗಿ ನಿಂತಾಗ ಈ ಭಾವನೆ ಅವನ ಮನಸ್ಸಿನಲ್ಲಿ ಹಾಯುತ್ತಿರಬೇಕು.


ಜಲಿಯನ್ ವಾಲಾಬಾಗ್‍ನಲ್ಲಿ ನೆರೆದಿದ್ದ ಜನಕ್ಕೆ ತಾವೊಂದು ರಾಜಕೀಯ ಆಂದೋಳನದಲ್ಲಿ ಭಾಗಿಗಳಾಗಬೇಕೆಂಬ ಆಕಾಂಕ್ಷೆಯಾಗಲಿ ಹುತಾತ್ಮರಾಗಬೇಕೆಂಬ ಅಭಿಲಾಷೆಯಾಗಲಿ ಇದ್ದಿರಲಾರದು. ಜನರಲ್ ಡಯರ್ ಸಹ ತನ್ನ ಪೈಶಾಚಿಕ ಘಾತುಕತೆಯನ್ನುಳಿದ ಬೇರಾವ ಭಾವನೆಯಿಂದಲೂ ಪ್ರೇರಿತನಾಗಿದ್ದ ಎಂದು ನಂಬುವುದು ಕಷ್ಟ. ಕ್ರೂರ ಮಾರ್ಗದಿಂದ ಭಾರತೀಯರನ್ನೂ ಬಗ್ಗು ಬಡಿಯಬಹುದೆಂದು ಅವನ ಎಣಿಕೆ. ಬ್ರಿಟಿಷ್ ಸಾಮ್ರಾಜ್ಯದ ಅನವರತ ಏಳಿಗೆಗೆ ಇದಕ್ಕಿಂತಲೂ ಸುಲಭವಾದ ಮಾರ್ಗವನ್ನು ಚಿಂತಿಸಲು ಅವನು ಅಶಕ್ತನಾಗಿದ್ದ. ಒಟ್ಟು ಸಾವಿರದ ಆರುನೂರ ಐವತ್ತು ಸುತ್ತುಗಳಷ್ಟು ಗುಂಡಿನ ಮಳೆಕರೆಯಿಸಿದ್ದ ಅವನು ಹೆಮ್ಮೆಯಿಂದ






ಪುಟ ೧೭೦

ಹೇಳಿಕೊಂಡದ್ದು ಇದು “ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ”. ಅಂದು ಪ್ರಾಣ ಕಳೆದುಕೊಂಡವರ ಸಂಖ್ಯೆ ಇದನ್ನು ಖಚಿತಗೊಳಿಸಿತ್ತು.


ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದ ಬಾಲಕ ಭಗತ್ ಸಿಂಗ್ ಮುಂದೆ ತನ್ನ ಕ್ರಾಂತಿಕಾರಿ ಗುಂಪಿನ ಸಹಾಯದಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ. ಇದರ ಫಲವಾಗಿ ಮರಣ ದಂಡನೆಗೆ ಈಡಾಗಿ ತನ್ನ ಸಹಚರರಾದ ಸುಖ್‍ದೇವ್, ರಾಜ್‍ಗುರು, ಭಟುಕೇಶ್ವರ ದತ್ತರೊಂದಿಗೆ ಹಸನ್ಮುಖಿಯಾಗಿ ತಾಯಿ ಭಾರತಾಂಬೆಯ ಸ್ವಾತಂತ್ರ್ಯದ ಹಣತೆಗೆ ತೈಲವೆಂಬಂತೆ ವೀರಯೋಧನಾಗಿ ಅಮರನಾದನು.


ಇಂಕಿಲಾಬ್ ಜಿಂದಾಬಾದ್.. ..!


ಶೀರ್ಷಿಕೆ: ಕೃತಿಕಾರರ ಪರಿಚಯ


ಉಪಶೀರ್ಷಿಕೆ: ಡಾಕ್ಟರ್ ಜಿ. ರಾಮಕೃಷ್ಣ: ಗಂಪಲಹಳ್ಳಿ ರಾಮಕೃಷ್ಣರವರು ಕ್ರಿಸ್ತ ಶಕ ಸಾವಿರದ ಒಂಬೈನೂರ ಮೂವತ್ತೊಂಬತ್ತರಲ್ಲಿ ಬೆಂಗಳೂರು ಗ್ರಾಮಾಂತರ ಮಾಗಡಿ ಬಳಿಯ ಕೆಂಪಸಾಗರದಲ್ಲಿ ಜನಿಸಿದರು. ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರಾಗಿ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ‘ದೇವಿಪ್ರಸಾದ್ ಮತ್ತು ಲೋಕಾಯುತ ದರ್ಶನ’, ‘ಭಗತ್ ಸಿಂಗ್’, ‘ಭೂಪೇಶಗುಪ್ತ’, ‘ಜೆಗೆವಾರ’, ‘ಲೆನಿನ್’, ಅನುವಾದ - ಬಾ ನೊಣವೇ, ‘ವಾನರನಿಂದ ಮಾನವ ದರ್ಶನ’ ಮತ್ತು ಹಲವಾರು ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನವನ್ನು ನೀಡಿ ಗೌರವಿಸಲಾಗಿದೆ.


ಚಿತ್ರ ಒಂದು: ಡಾಕ್ಟರ್ ಜಿ. ರಾಮಕೃಷ್ಣರವರ ಭಾವಚಿತ್ರ.


ಪ್ರಕೃತ ಪಾಠವನ್ನು ಜಿ. ರಾಮಕೃಷ್ಣರ ‘ಭಗತ್ ಸಿಂಗ್’ ಎಂಬ ಜೀವನ ಚರಿತ್ರೆಯಿಂದ ಆರಿಸಿಕೊಳ್ಳಲಾಗಿದೆ.


ಶೀರ್ಷಿಕೆ: ಅಭ್ಯಾಸ


ವಿಭಾಗ ೧.ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:


೧. ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಎಂದು ನಡೆಯಿತು?

೨. ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ತೋರಿಸುತ್ತಾನೆ?

೩. ಜಲಿಯನ್ ವಾಲಾಭಾಗ್ ನಲ್ಲಿರುವ ಒಕ್ಕಣೆ ಏನು?

೪. ಭಗತ್ ಸಿಂಗನ ಸಹಚರರು ಯಾರು?

೫. ಭಗತ್ ಸಿಂಗ್ ಹುತಾತ್ಮನಾದದ್ದು ಯಾವಾಗ?

ಅಧ್ಯಾಯ ಮುಕ್ತಾಯ.


2356 232